Breaking News

ಕಬಡ್ಡಿ: ಭಾರತಕ್ಕೆ ಸಾಟಿಯಾಗದ ಪಾಕ್‌

ಕಬಡ್ಡಿ: ಭಾರತಕ್ಕೆ ಸಾಟಿಯಾಗದ ಪಾಕ್‌

ದುಬೈ: ಭಾರತ ತಂಡದವರು ಚೊಚ್ಚಲ ಆವೃತ್ತಿಯ ಕಬಡ್ಡಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಶುಕ್ರವಾರ ನಡೆದ ಹಣಾಹಣಿಯಲ್ಲಿ ಅಜಯ್‌ ಠಾಕೂರ್‌ ಬಳಗ 36–20 ಪಾಯಿಂಟ್ಸ್‌ನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತು.
ಆರಂಭದಲ್ಲಿ ತಾಳ್ಮೆಯ ಆಟ ಆಡಿದ ಭಾರತ ತಂಡದವರು 4-3ರ ಮುನ್ನಡೆ ಗಳಿಸಿದರು. ಮೊದಲ 10 ನಿಮಿಷಗಳ ಅವಧಿಯಲ್ಲಿ ಪ್ರಬಲ ಪೈಪೋಟಿ ನೀಡಿದ ಪಾಕಿಸ್ತಾನ ಹಿನ್ನಡೆಯನ್ನು 5–6ಕ್ಕೆ ತಗ್ಗಿಸಿಕೊಂಡಿತು. ನಂತರ ನಾಯಕ ಅಜಯ್‌ (ಎಂಟು ಪಾಯಿಂಟ್ಸ್‌) ಮತ್ತು ರೋಹಿತ್ ಕುಮಾರ್‌ ರೈಡಿಂಗ್‌ನಲ್ಲಿ ಮಿಂಚಿದರು. ಹೀಗಾಗಿ ಭಾರತದ ಖಾತೆಗೆ 15 ಪಾಯಿಂಟ್ಸ್‌ ಸೇರ್ಪಡೆಯಾದವು. 
ಟ್ಯಾಕ್ಲಿಂಗ್‌ನಲ್ಲೂ ಮಿಂಚಿದ ಅಜಯ್‌ ಬಳಗದ ಆಟಗಾರರು 12 ಪಾಯಿಂಟ್ಸ್‌ ಕಲೆಹಾಕಿದರು. ಎರಡು ಬಾರಿ ಎದುರಾಳಿಗಳನ್ನು ಆಲೌಟ್‌ ಮಾಡಿದ ತಂಡ ಲೋನಾ ಪಾಯಿಂಟ್ಸ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡು ಜಯದ ಹಾದಿ ಸುಗಮ ಮಾಡಿಕೊಂಡಿತು. ಶನಿವಾರ ನಡೆಯುವ ಹಣಾಹಣಿಯಲ್ಲಿ ಭಾರತ ತಂಡ ಕೀನ್ಯಾ ವಿರುದ್ಧ ಸೆಣಸಲಿದೆ.

                                                       YOU MAY ALSO LIKE


No comments